ತಯ್ಯಬ್‍ಜೀ, ಅಬ್ಬಾಸ್
1854-1936, ಬರೋಡದ ಒಬ್ಬ ಸಮಾಜಸೇವಕ, ರಾಷ್ಟ್ರಪ್ರೇಮಿ, ಭಾರತ ಸ್ವಾತಂತ್ರ್ಯ ಹೋರಾಟಗಾರ. 1854ರ ಫೆಬ್ರವರಿ 1 ರಂದು ಬರೋಡದಲ್ಲಿ ಜನಿಸಿದರು. ತಂದೆ ಷಂಸುದ್ದೀನ್ ದೊಡ್ಡ ವ್ಯವಹಾರ ಸಂಸ್ಥೆಯೊಂದರ ಪಾಲುದಾರ. ಅಬ್ಬಾಸ್ ತಯ್ಯಬ್‍ಜೀ ಉದಾರ, ಪ್ರಗತಿಪರ ಹಾಗೂ ಶ್ರೀಮಂತ ಕುಲೀನ ಕೌಟುಂಬಿಕ ವಾತಾವರಣದಲ್ಲಿ ಬೆಳೆದರು. ತಮ್ಮ ಹದಿಮೂರನೆಯ ವಯಸ್ಸಿನಲ್ಲಿ ಇಂಗ್ಲೆಂಡಿಗೆ ಹೋಗಿ ಮೆಟ್ರಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ (1872). 1875ರಲ್ಲಿ ಬ್ಯಾರಿಸ್ಟರ್ ಆದರು. ಹನ್ನೊಂದು ವರ್ಷಗಳ ಕಾಲ ಇವರು ಇಂಗ್ಲೆಂಡಿನಲ್ಲಿದ್ದರು. ಪಾಶ್ವಾತ್ಯರ ಜನಜೀವನ ಮತ್ತು ರೀತಿನೀತಿಗಳನ್ನು ತುಂಬ ಮೆಚ್ಚಿದ್ದಲ್ಲದೆ, ವಿಕ್ಟೋರಿಯ ರಾಣಿಯ ನಿಷ್ಠಾವಂತ ಪ್ರಜೆಯಾಗಿ ಸ್ವದೇಶಕ್ಕೆ ಮರಳಿದರು.

ಸ್ವದೇಶಕ್ಕೆ ಹಿಂದಿರುಗಿದ ತಯ್ಯಬ್‍ಜೀ ಬರೋಡ ರಾಜ್ಯದ ಸೇವೆಯಲ್ಲಿ ನಿರತರಾದರು (1879). ಬರೋಡದ ಉಚ್ಚ ನ್ಯಾಯಾಲಯದ ನ್ಯಾಯಧೀಶರಾಗಿ ಮೊದಲು ನೇಮಕಗೊಂಡ ಇವರು 34 ವರ್ಷಗಳ ಅನಂತರ ಪ್ರಧಾನ ನ್ಯಾಯಾಧೀಶರಾಗಿ ನಿವೃತ್ತರಾದರು (1913). ಮೊದಲಿನಿಂದಲೂ ಬಡ ಮುಸ್ಲಿಮರ ಉನ್ನತಿಗಾಗಿ ಇವರು ಶ್ರಮಿಸುತ್ತ ಬಂದರು. ಮುಸ್ಲಿಮ್ ಬಾಂಧವರಿಗಾಗಿ ಅನೇಕ ಶಾಲೆಗಳನ್ನು ತೆರೆದರು. ಬರೋಡದ ಅಂಜುಮನ್-ಇ-ಇಸ್ಲಾಂ ಅಂಥವುಗಳಲ್ಲೊಂದು.

ಆರಂಭದಿಂದಲೂ (1885) ತಯ್ಯಬ್‍ಜೀ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾಗಿದ್ದರು. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದಲ್ಲಿ ಬ್ರಿಟಿಷರ ಕ್ರೂರ ವರ್ತನೆ ಅಬ್ಬಾಸರ ವಿಶ್ವಾಸವನ್ನು ಕದಲಿಸಿತು. 64ನೆಯ ವಯಸ್ಸಿನಲ್ಲಿ ತಯ್ಯಬ್‍ಜೀ ಅವರ ಜೀವನದಲ್ಲಿ ಮಹತ್ತರ ಬದಲಾವಣೆಗಳಾದುವು. ಅವರು ಸ್ವಾತಂತ್ರ್ಯ ಚಳವಳಿಗೆ ಧುಮುಕಿ ವಿದೇಶಿ ಬಟ್ಟೆಗಳಿಗೆ ಬಹಿಷ್ಕಾರ ಹಾಕಿದರು. ಸ್ವದೇಶಿ ವ್ರತವನ್ನು ಅನುಸರಿಸಿ ನಿಜವಾದ ಸತ್ಯಾಗ್ರಹಿಯಾಗಿ ಕೆಲಸ ಮುಂದುವರಿಸಿದರು.

ತಯ್ಯಬ್‍ಜೀ 1919-20ರಲ್ಲಿ ಕಾಂಗ್ರೆಸ್ಸು ರಚಿಸಿದ ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ತನಿಖಾ ಸಮಿತಿಯ ಸದಸ್ಯರೂ 1920ರ ಆಗಸ್ಟ್‍ನಲ್ಲಿ ಗುಜರಾತ್ ರಾಜಕೀಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು. 1921ರಲ್ಲಿ ಅಹಮದಾಬಾದಿನ ಕಾಂಗ್ರೆಸ್ ಅಧಿವೇಶನದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಗುಜರಾತ್ ಮತ್ತು ಕಾಠಿಯಾವಾಡದಲ್ಲಿ ಖಾದಿ ವ್ಯಾಪಾರದ ವ್ಯವಸ್ಥೆ ಮಾಡಿದರು. 1928ರ ಬಾರ್ಡೋಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. 1930ರಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರ ಅನಂತರ ಅದರ ನಾಯಕರಾಗಿದ್ದು ಗಾಂಧೀಜಿಯವರ ಬಂಧನದ ಅನಂತರ ಸತ್ಯಾಗ್ರಹವನ್ನು ಮುಂದುವರಿಸಿ ಬಂಧನಕ್ಕೊಳಗಾದರು. ಅಮ್ರೋಲಿಯಲ್ಲಿ ನಡೆದ ಬರೋಡ ಪ್ರಜಾ ಮಂಡಳಿಯ ಹನ್ನೊಂದನೆಯ ಪರಿಷತ್ತಿಗೂ (1933) ಬರೋಡದಲ್ಲಿ ನಡೆದ ಪ್ರಜಾಮಂಡಳಿಯ ಹನ್ನೆರಡನೆಯ ಪರಿಷತ್ತಿಗೂ (1935) ಅಧ್ಯಕ್ಷರಾಗಿದ್ದರು.

ಅಬ್ಬಾಸರು ಇಂಗ್ಲಿಷ್, ಉರ್ದು, ಹಿಂದುಸ್ತಾನಿ ಮತ್ತು ಗುಜರಾತಿ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಇವರದು ಸರಳಜೀವನ, ಸಮಸ್ತ ಸಮಾಜದ ಮೆಚ್ಚುಗೆಗೆ ಪಾತ್ರವಾದ ವ್ಯಕ್ತಿತ್ವ. ಉತ್ತಮ ಸಮಾಜ ಸೇವಕರಾಗಿ, ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯ ಪ್ರತಿಭಟನೆಯ ಚಳವಳಿಯಲ್ಲಿ ಮುಖ್ಯ ಪಾತ್ರ ವಹಿಸಿ ಗಾಂಧೀಜಿಯವರ ನಿಷ್ಟಾವಂತ ಮತ್ತು ನೆಚ್ಚಿನ ಅನುಯಾಯಿಯಾಗಿದ್ದರು. 1936ರ ಮೇ 9ರಂದು ಮರಣಹೊಂದಿದರು.
(ಕೆ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ